Bannanje Govindacharya – Book Release

ಡಾ. ಬನ್ನಂಜೆ ಗೋವಿಂದಾಚಾರ್ಯರು ರಾಮಾಯಣ ಪುಸ್ತಕವನ್ನು ಲೋಕಾರ್ಪಣೆ ಗೊಳಿಸುವಾಗ ನಡೆದ ಅಪರೂಪದ ದೃಶ್ಯ.

ಈ ಘಟನೆ ದಿನಾಂಕ 20 ಜನವರಿ 1999 ಬುಧವಾರ ಮಾಸ್ತಿ ರಂಗ ಮಂದಿರ ಶಂಕರಪುರ ಬೆಂಗಳೂರಿನಲ್ಲಿ ವಾಲ್ಮೀಕಿ ಕಂಡ ರಾಮಾಯಣ ಎಂಬ ಆಚಾರ್ಯರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಡೆದಿದೆ.

ಅಂದು ಬನ್ನಂಜೆಯವರ ರಾಮಾಯಣ ಪುಸ್ತಕ ಬಿಡುಗಡೆ.  ಸಂಜೆ ಆರರ ನಂತರದ ಹೊತ್ತು. ಆ ಸಮಯ ಮಂಗಗಳು ಎಂದೂ ಕೆಳಗೆ ಇರುವುದಿಲ್ಲ. ಅವುಗಳಿಗೆ ಕತ್ತಲಲ್ಲಿ ಕಣ್ಣು ಕಾಣುವುದಿಲ್ಲ ಆದ್ದರಿಂದ ಮರ ಏರಿ ಕುಳಿತಿರುವ ಹೊತ್ತು.

ಅಂದು ಆಚಾರ್ಯರು ಕಾರಿನಿಂದ ಇಳಿದು  ಸಭಾಂಗಣ ಪ್ರವೇಶಿಸುವ ಹೊತ್ತಿಗೆ ಎಲ್ಲಿಂದಲೋ  ಗಡವವೊಂದು ಆಚಾರ್ಯರ ಜೊತೆ ಜೊತೆಗೆ ಒಳಗೆ ಪ್ರವೇಶಿಸಿತು. ಪ್ರೇಕ್ಷಕರು ಹೆದರಿದರು. ಆಚಾರ್ಯರು ‘ಅದರ ಪಾಡಿಗೆ ಅದನ್ನು ಬಿಡಿ ಗದ್ದಲ ಮಾಡಬೇಡಿ’ ಎಂದು ತನ್ನ ಪಾಡಿಗೆ ತಾನು ವೇದಿಕೆ ಏರಿದರು. ಅವರ ನಿತ್ಯ ಉಪನ್ಯಾಸ ನಡೆಯುತ್ತಿದ್ದ ವೇದಿಕೆ ಅದು. ಬೇರೆ ಅತಿಥಿಗಳು ಯಾರೂ ಇಲ್ಲ. ಆಚಾರ್ಯರು ವೇದಿಕೆ ಏರಿದಂತೆ ಅದೂ ಏರಿತು. ಅವರು ಮೇಜಿನ ಮೇಲೆ ಇರುವ ದೇವರ ಚಿತ್ರಕ್ಕೆ ಆರತಿ ಬೆಳಗುವ ನಿತ್ಯದ ರೂಢಿ. ಅದೂ ಆ ಮೇಜಿನ ಮೇಲೆ ಏರಿ ಚಿತ್ರದ ಬಳಿ ಕುಳಿತು ಆರತಿಗೆ ಸಾಕ್ಷಿ ಆಯಿತು. ಆ ಬಳಿಕ ಆಚಾರ್ಯರು ನೆಲದ ಮೇಲೆ ಇರುವ ಹಾಸಿನ ಮೇಲೆ ಕುಳಿತು ತನ್ನ ಪುಸ್ತಕ ಬಿಡುಗಡೆ ಮಾಡಲು ತೊಡಗಿದಾಗ ಅದುವರೆಗೆ ಅವರ ಯಾವ ಕ್ರಿಯೆಗೂ ಅಡ್ಡಿ ಮಾಡದ ಈ ಕಪಿ ಅವರ ಕೈಯಿಂದ ಪುಸ್ತಕದ ಕಟ್ಟನ್ನು  ತೆಗೆದುಕೊಂಡು ಅದರ ಆವರಣವನ್ನು ಹರಿದು ತಾನೇ ಪುಸ್ತಕವನ್ನು ಅನಾವರಣಗೊಳಿಸಿತು. ಪುಸ್ತಕವನ್ನು ಬಿಡಿಸಿತೇ ಹೊರತು ಹರಿಯುವ ಅಥವಾ ಅನುಚಿತವಾದ ಯಾವ ಕಾರ್ಯವನ್ನೂ ಮಾಡಲಿಲ್ಲ. 

ಆ ಬಳಿಕ ಬನ್ನಂಜೆಯವರ ಉಪನ್ಯಾಸ ಆರಂಭ ಆಗಿ ಮುಗಿಯುವ ವರೆಗೂ ಪ್ರೇಕ್ಷಕರ ಬಳಿ ಕುಳಿತು ಆಲಿಸಿ ಹೋಯಿತು. ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಇದಕ್ಕೆ ಹಲವರು ಸಾಕ್ಷಿ. ಪ್ರತೀ ದಿವಸದ ಉಪನ್ಯಾಸದ ಧ್ವನಿಮುದ್ರಣ ಮಾತ್ರ ಮಾಡುತ್ತಿದ್ದ ಆಯೋಜಕರು ಅಂದು ಪುಸ್ತಕ ಬಿಡುಗಡೆ ಸಮಾರಂಭ ಇರುವುದರಿಂದ ವಿಡಿಯೋ ವ್ಯವಸ್ಥೆ ಮಾಡಿದ್ದರು. ಆದ್ದರಿಂದ ಈ ಅಪೂರ್ವ ಚಾರಿತ್ರಿಕ ಘಟನೆ ದಾಖಲಾಯಿತು.ಈ ಪವಾಡ ಸದೃಶ ಘಟನೆಯನ್ನು ಮರುದಿನ ಎಲ್ಲ ಪತ್ರಿಕೆಗಳೂ ದಾಖಲಿಸಿದವು.